ಏಪ್ರಿಲ್: ಕ್ರಿಸ್ತವರ್ಷದ ನಾಲ್ಕನೆಯ ತಿಂಗಳು. ಈ ತಿಂಗಳಲ್ಲಿ 30 ದಿವಸಗಳಿವೆ. ರೋಮ್ ಪಟ್ಟಣದ ಸ್ಥಾಪಕ ರೋಮ್ಯುಲಸ್ ಎಂಬುವನಿಂದ ಈ ಸಂಖ್ಯೆ ವಿಧಿತವಾಯಿತೆಂದು ರೋಮನ್ ಐತಿಹ್ಯದಿಂದ ತಿಳಿದುಬರುತ್ತದೆ. ನ್ಯೂಮ ಪಾಂಪಿಲಿಯಸ್ ಎಂಬಾತ ಈ ತಿಂಗಳಿಗೆ 29 ದಿವಸಗಳನ್ನು ನಿಗದಿಪಡಿಸಿದ. ಆದರೆ ಜೂಲಿಯಸ್ ಸೀಸರ್ 30 ದಿವಸಗಳೆಂಬುದನ್ನೇ ಸ್ಥಿರೀಕರಿಸಿದ. ಇಂದಿಗೂ ಇದೇ ಸಂಖ್ಯೆ ಉಳಿದಿದೆ. ಮೂಲ ಅಲ್ಬೇನಿಯನ್ ಅಥವಾ ಲ್ಯಾಟಿನ್ ತಾರೀಖು ಪಟ್ಟಿಗಳಲ್ಲಿ ಏಪ್ರಿಲಿಗೆ 36 ದಿವಸಗಳನ್ನು ಕಾಣಿಸಿದ್ದು, ಇದನ್ನೇ ಮೊದಲನೆಯ ತಿಂಗಳೆಂದು ಗಣಿಸಲಾಗಿತ್ತು. ರೋಮನರು ಈ ತಿಂಗಳನ್ನು ಶುಕ್ರನಿಗೆ ಪವಿತ್ರವಾದ ತಿಂಗಳೆಂದು ಪರಿಗಣಿಸಿದ್ದರು. ಗ್ರೀಕ್ ಭಾಷೆಯಲ್ಲಿ ಶುಕ್ರನಿಗಿರುವ ಆಫ್ರೋಡೈಟ್ ಎಂಬ ಪದದಿಂದ ಏಪ್ರಿಲ್ ಪದ ನಿಷ್ಪನ್ನವಾಗಿದೆಯೆಂದು ತಿಳಿಯಲಾಗಿತ್ತು. ರೋಮನಿನ ಏಪ್ರಿಲಿಸ್ ಎಂಬ ಪದದಿಂದ ಏಪ್ರಿಲ್ ಆವಿರ್ಭವಿಸಿದ್ದು ತೆಗೆ, ಪ್ರಾರಂಭಿಸು ಎಂಬ ಅರ್ಥ ನೀಡುತ್ತದೆ. ಹೂ, ಗಿಡ-ಮರಗಳು ಚಿಗುರುವ ಕಾಲದ ಸೂಚಕವಾಗಿ ಈ ಹೆಸರನ್ನು ಇಟ್ಟುಕೊಂಡಿದ್ದಿರಬಹುದು. ವಸಂತಕಾಲದ ಪ್ರಾರಂಭವನ್ನು ಏಪ್ರಿಲ್ ಸೂಚಿಸುವುದು. ಇಂದಿಗೂ ಏಪ್ರಿಲ್ 21ರಂದು ರೋಮ್ನಗರದ ಹುಟ್ಟುಹಬ್ಬ ರೋಮಿನಲ್ಲಿ ಅತಿ ವಿಜೃಂಭಣೆಯಿಂದ ನಡೆಯುತ್ತದೆ.

ಭಾರತೀಯ ಪಂಚಾಂಗದ ಫಾಲ್ಗುಣ-ಚೈತ್ರಮಾಸಗಳು ಸಾಮಾನ್ಯವಾಗಿ ಈ ತಿಂಗಳಲ್ಲಿ ಸೇರಿಕೊಂಡಿರುತ್ತವೆ. ಸೌರಮಾನ ಯುಗಾದಿ ಸಾಮಾನ್ಯವಾಗಿ ಏಪ್ರಿಲ್ 13, 14ರಂದೇ ಬರುತ್ತದೆ. ಅಧಿಕಮಾಸ ಬಂದ ವರ್ಷದ ಮೂರನೆಯ ವರ್ಷದಲ್ಲಿ ಚಾಂದ್ರಮಾನ ಯುಗಾದಿ, ಶ್ರೀರಾಮನವಮಿ ಮುಂತಾದ ಹಬ್ಬಗಳು ಈ ತಿಂಗಳಲ್ಲೇ ಬರುತ್ತವೆ. 						     

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ